Showing posts with label Photography_Kannada. Show all posts
Showing posts with label Photography_Kannada. Show all posts

Tuesday, 20 March 2018

ಒಂಟಿ ಹಕ್ಕಿಯ ಹಾಡು. . .



ಒಂಟಿ ಹಕ್ಕಿಯ ಹಾಡು,
ಕೇಳುವವರಾರಿಹರು?
ಅಲ್ಲೆಲ್ಲೋ  ಕುಳಿತವರೋ?
ಇನ್ನೆಲ್ಲೋ ಮರೆಯಾದವರೋ?

ಇನ್ನೇನು, ಸ್ವಲ್ಪ ಸಮಯಕ್ಕೆ,
ಕುಳಿತ ಹಕ್ಕಿಯೂ ಮರೆಯಾಗುತ್ತದೆ,
ಅಂತೆಯೇ, ಅದರ ಹಾಡೂ ಕೂಡ!
ಆಲಿಸಲು ಕಿವಿಗಳೇಕೆ ಬೇಕು?

ಇಲ್ಲಿ, ಹಕ್ಕಿಗಳು ಮುಗಿಲು ತೊರೆಯುತ್ತವೆ ,
ಮಂದಿ ಮುಗಿಲು ಮುಟ್ಟುತ್ತಾರೆ,
ಕನಸುಗಳ ರೆಕ್ಕೆ ಜ್ವಲಿಸುತ್ತದೆ,
ಹಾಡೊಂದು ಮೆಲ್ಲಗೆ ಚಲಿಸುತ್ತದೆ!

ಆ ಹಾಡ ಹೆಜ್ಜೆ ಹಿಡಿದು ಸಾಗು,
ಬಿದ್ದ ರೆಕ್ಕೆಗಳೂ ಕಾಣಬಹುದು,
ಕದ್ದ ಕವಿತೆಗಳೂ ಕಾಣಬಹುದು!
ಸದ್ದು ಮಾಡಬೇಡ, ಹಕ್ಕಿ ಹಾರೀತು!

 -------------- ಆದಿ

Thursday, 8 March 2018

ಇಳಿಸಂಜೆಯ ತಳಿರು. . .!


                           ಬರಿದಾಗಿಲ್ಲ ಮಾತುಗಳು,  ಸರಿದಿಲ್ಲ ಬೆಳಕ ತೆರೆ! ಹಸಿರು ಮನೆಯಲ್ಲಿ , ನೆರಳು ನಗುವುದು, ತಳಿರು ತೂಗುವುದು, ಕಲ್ಲು ಬೆಂಚುಗಳಲ್ಲಿ ಗುರುತು ಮೂಡಿಲ್ಲ, ಎದೆಯ ಹಾದಿಯಲ್ಲೇಕೆ ಹೆಜ್ಜೆ ಗುರುತು? ದಶಕಗಳು ಕ್ಷಣಗಳಾಗಿ ನೆನಪ ಸೇರಿದವು.  ಸಾಗಿ ಬಂದ ಹಾದಿಯ ಹೂಗಳ ಕೇಳು. ಹೊಸ ಹಾಡೊಂದ ಬರೆಯಲು ಪದಗಳ ನೀಡುವಿರಾ? ಘಮಿಸಿದರೆ ಅದುವೇ ಸಾಹಿತ್ಯ! ರಮಿಸಿದರೆ, ಅದುವೇ ಸಾಂಗತ್ಯ. 

Monday, 19 February 2018

ತೇಜೋಮಯ. . .



ಬೆಳಕೊಂದು ಸೋಜಿಗ. ಪ್ರತಿಫಲಿಸಿದಂತೆಲ್ಲ ವಿವಿಧ ರೂಪ ಪಡೆಯಬಲ್ಲದು. ಇಲ್ಲಿ ರವಿಗೂ ಆಯಸ್ಸಿದೆ. ಆ ಮಹಾನಕ್ಷತ್ರವು ಪತನದತ್ತ ಸಾಗುತ್ತಿದೆ. ಸಹಸ್ರ ಕೋಟಿ ಸೌರಮಂಡಲಗಳಿರುವ ನಮ್ಮ "ಹಾಲು ಹಾದಿಯಲ್ಲಿ" ಎಲ್ಲೆಲ್ಲಿ ಜೀವ ವೈವಿಧ್ಯವೋ, . ಬೆಳಕು ಚಲಿಸಿದಲ್ಲೆಲ್ಲ ಬದುಕು. ಬೆಳಕು ಜ್ವಲಿಸಿದಲ್ಲೆಲ್ಲ ಪತನ. ಪುಟ್ಟ ಜೀವಿಯ, ಪುಟ್ಟ ಮನೆಯೊಂದು, ಬೆಳಕಿನ ಕಿರಣಗಳಿಗೆ ಸ್ಪಂದಿಸುತ್ತದೆ. ಇಲ್ಲಿ ಬೆಳಕಿಗೆ ರೂಪಾಂತರ. ಬದುಕಿಗೆ ಹೊಸ ಮನ್ವಂತರ. . .

Wednesday, 31 January 2018

ತೇರ ಏರಿ ಅಂಬರದಾಗೇ. . .



                         ಮೂಡಣದಲ್ಲಿ ಹಣತೆಯೊಂದು ಬೆಳಗುವ ಸಮಯ. ಇರುಳು ಸುಮ್ಮನೆ ಹಿಂದೆ ಸರಿಯುತ್ತದೆ. ದೀಪ ತಂತಾನೆ ಹೊತ್ತಿ ಉರಿಯುತ್ತದೆ. ಇದು ಮುಗಿಲು ರಂಗೇರುವ ಸಮಯ.  ಆಗಲೇ ಸಾಯಬೇಕಿದ್ದ ಒಣಗಿದ ಹುಲ್ಲು ಕಡ್ಡಿಯೊಂದು ಕತ್ತೆತ್ತಿ ನೋಡುತ್ತದೆ, ಬೆಳಕಿಗೆ ತಲೆ ಬಾಗುತ್ತದೆ. ಕಾಲಚಕ್ರಕ್ಕೆ  ಸಿಲುಕಿ  ಬೆಳ್ಳಿರಥವೊಂದು ತನ್ನ ವೇಗ ಬದಲಿಸುತ್ತದೆ. ಹಕ್ಕಿಯೊಂದು  ಹಾಡುತ್ತದೆ. ನೆನಪೊಂದು ಕಾಡುತ್ತದೆ. ಮೇಣ ಕರಗುವ ಮುನ್ನ, ಸೊಡರು ದೀಪವೊಂದು ಜಗವೆ ಬೆರಗಾಗುವಷ್ಟು ಬೆಳಕ ನೀಡುತ್ತದೆ.

Wednesday, 13 December 2017

ಹೆಜ್ಜೆ ಮೂಡದ ಹಾದಿ. . .



                            ಬಾ ಜೊತೆಗೆ ಸಾಗೋಣ, ಒಂದಷ್ಟು ಗಾವುದ. ಮಾತು ಮಾತುಗಳಲಿ ಮೌನವೆಂಬುದ ಮರೆತು. ಮೂಡದಿರಲಿ  ಹೆಜ್ಜೆಯ ಗುರುತು, ಬಳಸಿ ಬಂದಾರು ಹತ್ತಾರು ಮಂದಿ. ಅಂಟದಿರಲಿ ಹಾಸಿದ ಹೂವಿನ ಬಣ್ಣ, ನೆನಪುಗಳು ಎಂದಿಗೂ ತಿಳಿನೀರ ಬಿಂಬದಂತೆ.  ಸಾಗಿ ಬಂದ ತಿರುವುಗಳೇ, ಬದುಕಿನ ರೋಚಕತೆಯ ಮೂಲ. ತೀರದ ದಾಹಕೂ, ಇಲ್ಲ ಸಲ್ಲದ ಮೋಹಕೂ - ತಿರುಗಿ ನೋಡಲೊಲ್ಲದು ಕಾಲ. . . 

Tuesday, 5 December 2017

ಹೆಜ್ಜೆ ಬೆಸೆದು. . .





                         ಹೆಜ್ಜೆಯೊಡನೆ ಹೆಜ್ಜೆಯಿಡು, ಕರೆದೊಯ್ಯುವೆ ಬದುಕ ಪಥದಲ್ಲಿ. ಗೆಜ್ಜೆ ಸದ್ದು ಕೇಳದಂತೆ, ಮೆಲ್ಲ ಮೆಲ್ಲಗೆ ಸಾಗುವ - ಗದ್ದಲಕೆ ಮೌನ ಮುರಿದೀತು.  ಉದುರಿದ ಎಲೆಗಳೇ ಇಲ್ಲಿ ಹೂವ ಹಾದಿಯಂತೆ. ತಣ್ಣನೆ ಗಾಳಿಗೆ ಮೌನ ಮಾತಾದೀತು. ನಿಂತ ಮರವೊಂದು ದೃಷ್ಟಿ ತೆಗೆದೀತು. ಸೃಷ್ಟಿಯ ಸೋಜಿಗಕೆ ಯಾವ ಒಲವಿನ ಹಂಗು? ಅದು ಎಲ್ಲದಕ್ಕೂ ಎತ್ತರ. ನೀಡದೆಂದಿಗೂ ಉತ್ತರ. ಮೆಲ್ಲಗೆ ಆಲಿಸುವೆಯಾ, ಇಲ್ಲಿ ಇಂಚರವೂ ಹಾಡಾದೀತು.


Tuesday, 28 November 2017

ಕಸದ ರಾಶಿಯಲೊಂದು ಕುಸುಮ. . .


                        ಕಸದ ರಾಶಿಯಿಂದ ಕುಸುಮವೊಂದು ಇಣುಕಿದೆ. ಮಿಣುಕು ದೀಪದ ತುಣುಕೊಂದು ಇರುಳ ಛೇದಿಸಿ ಬೆಳಗಿದಂತೆ. ಕ್ಷಣ ಕ್ಷಣವೂ ಇಲ್ಲಿ ಅಸ್ಥಿತ್ವಕ್ಕೆ ಹೋರಾಟ.  ಜೊತೆಗಿದ್ಕ ಬಳಗ ಕಸದ ನಡುವೆಲ್ಲೋ ಕಳೆದು ಹೋಗಿದೆ.  ಕತ್ತೆತ್ತಿ ನೋಡಿರೆ ಸುತ್ತಲೂ ಹೆಜ್ಜೆಗಳ ಕರ್ಕಶ ಸದ್ದು. ಎದೆಯಲ್ಲಿ ತುಳಿತಕ್ಕಿ ಸಿಕ್ಗುವ ಭಯ. ಬೀಸಿದ ಗಾಳಿಗೆ ಮುಗಿಬಿದ್ದ ಎಲೆಯೊಂದು ಹೂವ ಕಣ್ಣ ಮುಚ್ಚಿತು. ಹೊತ್ತು ಮುಳುಗುವ ಮುನ್ನವೇ ಸುತ್ತೆಲ್ಲ ಅಂಧಕಾರ. ಮತ್ತೆ ಗಾಳಿ ಬೀಸಲಿ ಎಂಬ ಸಣ್ಣ ಹಂಬಲ.  ಆಗೋ ನೋಡು. ಬೀಸಿತು ಗಾಳಿ. ನಕ್ಕಿತು ಹೂವು, ಕಾರಣವಾ ನೀವೇ ಕೇಳಿ. . . !

Tuesday, 21 November 2017

ಹುದುಗಿ ಹೋಗದಿರಲಿ . . .

Dissolving memories. . .
           
                     ಹುದುಗಿ ಹೋಗದಿರಲಿ ಕನಸುಗಳು. ನಿಂತ ನೀರಿನಲ್ಲಿ ಮೂಡುವ ಕನಸಂತೆ ಬಿಂಬಗಳು. ಒಮ್ಮೆ ಹಸಿರಾಗಿ, ಮತ್ತೊಮ್ಮೆ ಮೊಬ್ಬಾಗಿ ನಿಧಾನ ಗತಿಯಲ್ಲಿ ಮರೆಯಾಗುತ್ತವೆ. ಮರೆಯಾಗುವ ಮುನ್ನ, ನೆನಪಾಗಬೇಕು. ಬೆಳಕಾಗಬೇಕು, ಬದುಕಾಗಬೇಕು. ಉಳಿದಿರುವ ಕ್ಷಣಗಳು ಹೆಚ್ಚಿಲ್ಲ. ಪಾರದರ್ಶಕ ನಿಲುವುಗಳನ್ನು ಮನಸ್ಸು ಎಂದಿಗೂ ಮುಚ್ಚಿಲ್ಲ. ಅಚ್ಚಳಿಯದೆ ಅಚ್ಚಾಗಲಿ, ಹಚ್ಚಿದ ಕಿಚ್ಚಲಿಹ ಮೆಚ್ಚಿನ ನೆನಪುಗಳ ಗುಚ್ಛ.

Tuesday, 31 October 2017

ಸುಪ್ತ ಜಗತ್ತು. . .



            ಅಲ್ಲೊಂದು ಗಾಜಿನ ಮನೆಯಿದೆ.  ಒಳಗೆ ಕಾಲಿಟ್ಟರೆ ಅದೊಂದು ವಿಸ್ಮಯ ಲೋಕ . ಕಲಾವಿದರಿಗೆ ಸಗ್ಗವೀಡು.  ಸಹಸ್ರ ಕುಂಚಗಳ ಬಣ್ಣ ಅಲ್ಲಿ ಕರಗಿ ಹೋಗಿದೆ.  ಬಂದು ಹೋದ ಹೆಜ್ಜೆಗಳ ಲೆಕ್ಕವೂ ಸಿಗಲಿಲ್ಲ. ಘಟಾನುಘಟಿ ಕಲಾವಿದರೆಲ್ಲ ಕುರುಹ ಬಿಟ್ಟು ಹೋದರು. ಆದರೇನಂತೆ?  ಹೊರಗಿನ ಅಂಗಳದಲ್ಲಿ ಕುಳಿತ ಹಕ್ಕಿಗೆ ಯಾವುದೇ ಪರಿವಿಲ್ಲ. ಅದು ತನ್ನದೇ ಜಗದಲ್ಲಿ ತಲ್ಲೀನ. ಬಿಸಿಲು ಬಿದ್ದರೇನು. ಮಳೆ ಸುರಿದರೇನು. ರೆಕ್ಕೆ ಬಿಚ್ಚಿದರೆ, ಕಾಲ ಚಕ್ರಗಳೇ ಒಮ್ಮೆ ನಿಂತಾವು ( ಹಕ್ಕಿಯ ಸುಪ್ತ ಜಗದಲ್ಲಿ).

Wednesday, 25 October 2017

ಬಿಸಿಲ ಪಿಸುಮಾತು. . .




"ಬಿರು ಬಿಸಿಲಿದೆ. ಹಾಸಿದಂತೆ ಹಸಿರಿದೆ. ಮಾತಿಗೆ ಕುಳಿತರೆ, ಮುಸ್ಸಂಜೆಯಾದೀತು, ಇರುಳೂ ಕವಿದೀತು. ಪಿಸುಮಾತಿನಲಿ, ತುಸು ಹೊತ್ತು ಕಳೆಯೋಣ. ನೆರಳೂ ಒಮ್ಮೆ ಬೆಳಕ ಸವಿದೀತು. ಕಟ್ಟಡ ಕದಲದೆ ನಿಂತಿದೆ. ಕಿಟಕಿಯಾಚೆಯಿಂದ ಕಣ್ಣುಗಳು ಇಣುಕಿವೆ. ಪ್ರಜ್ಞೆ ಬೇಕೇನು? ಪದಗಳಿಗೆ ಮಾಧುರ್ಯದ ಅಲಂಕಾರ ತೊಡಿಸಲು? ಮಾತು ಮಾತಿನಲ್ಲಿ ಒಲವ ಸಮೀಕರಣಗಳ ಬಿಡಿಸಲು?"

Note: Photo taken near Homme Museum, Paris. A couple in conversation. . . 

Wednesday, 4 October 2017

ಪಾಳು ಬಿದ್ದ ಮನೆಯ ಹೂವು. . .



                  ಮಹಾಯುದ್ಧವನು ಕಂಡ ಪಾಳು ಬಿದ್ದ ಮನೆಯೊಂದಿದೆ.  ಮನೆ ನೋಡಲು ಬಂದವರು ಭೂತ ಬಂಗಲೆ ಎಂದು ಕರೆದಾಡಿ ನಕ್ಕಿದ್ದುಂಟು. ಕಡಿಮೆ ಬಾಡಿಗೆಗೆ ಸಿಕ್ಕಿದ್ದಕ್ಕೆ  ಖುಷಿಯೂ ಪಟ್ಟದ್ದುಂಟು. ಗುಂಡಿನ ಏಟು ಮಾಡಿದ  ಘಾಯಗಳು ಅಲ್ಲಲ್ಲಿ ಕಂಡಾವು.  ನೆನಪು ಮಾಸದಿರಲಿ ಎಂದು ಬಣ್ಣವನ್ನೂ ಬಳಿದಿಲ್ಲ. ಬಿದ್ದ ಸಾವಿರಾರು ಮಳೆಗಳಿಗೆ ಗೋಡೆ ಕುಸಿದಿಲ್ಲ.  ಅಳಿಸಿಹೋದ ಬರಹಗಳಿಗೆ ಯಾವುದೇ ಹೆಸರಿಲ್ಲ. ಮೌನ ಕರಗುತ್ತದೆ, ಉಸಿರ ಬಿಸಿ ಬೆಸುಗೆಗೆ. ಹೂವು ನಗುತ್ತದೆ, ಮುಸ್ಸಂಜೆಯ ಬಿಗಿ ಅಪ್ಪುಗೆಗೆ.  ಜಗುಲಿಯಲ್ಲಿ ಬಿದ್ದಿದ್ದ ಬಣ್ಣದ ಛತ್ರಿ, ಹನಿಗಳ ಬೆನ್ನಿಗೇರಿಸಿ ಕಣ್ಣ ತೆರೆಯುತ್ತದೆ. . . ."


Note: On a rainy day, when I came back home with umbrella, colors of evening looked distinct. They seemed like they are in sync with colors of umbrella. Then i arranged the frame in such a way to get old house in background, focusing for colors of Umbrella.

Tuesday, 26 September 2017

ಮಳೆ ನಿಂತು ಹೋದ ಮೇಲೆ. . .

Add caption

ಮಳೆಯೊಂದು ಬಂದು ಹೋಗಿದೆ. ಕುರುಹುಗಳೆಲ್ಲವ ನೆನಪ ನೌಕೆಗೆ ನೂಕಿಬಿಟ್ಟು. ಪ್ರತಿ ಹೆಜ್ಜೆ ಇಟ್ಟಾಗಲೂ ಪುಳಕ.  ಅಲ್ಲಲ್ಲಿ ಕಾಣೋ ಒಬ್ಬಿಬ್ಬರು. ಕೆಂಪು, ಕೆಂಪಿನ ಪಕ್ಕ ನೀಲಿ, ಅದರ ಜೊತೆಗೆ ಹಳದಿ, ಅಲ್ಲಲ್ಲಿ ಹಸಿರು, ಮತ್ತೆಲ್ಲೋ ಗುಲಾಬಿ -  ಬಣ್ಣ ಬಣ್ಣದ ಮನೆಗಳು - ಬಹುಷಃ ಈ ನಗರ ನಿರ್ಮಿಸಿದ್ದು ಅಂಬೆಗಾಲಿಟ್ಟ ಕಿನ್ನರನೇನೋ. ಪುಟ್ಟ ಪುಟ್ಟ ಹೆಜ್ಜೆಯಿಟ್ಟು, ರಂಗಿನೋಕುಳಿ ಎರಚಿದಂತೆ. ಅಲ್ಲೋ ಇಲ್ಲೋ ಕಾಣುವ ಜನತೆಗೆ ನಾವೇ ಕುತೂಹಲದ ಕೇಂದ್ರಬಿಂದು.  ಕೆಲವೊಂದು ಹಾದಿಗಳಲ್ಲಂತೂ ನೀರವತೆ. ಸುಮ್ಮನೆ ನಿಂತರೆ, ಹೆಜ್ಜೆ ಸಪ್ಪಳದಳಲ್ಲೂ ಹಾಡು ಕೇಳೀತು. ಎಲ್ಲ ಗೊಂದಲಗಳನ್ನೂ ಗಂಟು ಮೂಟೆ ಕಟ್ಟಿಟ್ಟು, ಈ ನಗರಿಗೆ ಬಂದು ನೆಲೆಸಿದರಾಯ್ತು. ಬಣ್ಣದ ಲೋಕದಲ್ಲಿ ಸಣ್ಣ ಮನೆಯೊಂದು ಸಾಕು - ಕಣ್ಣ ನೋಟಗಳಲಿ ಕವಿತೆ ಹೊಮ್ಮೀತು.

Thursday, 17 August 2017

ಹೆಜ್ಜೆ ಹೆಜ್ಜೆ ಬೆಸೆದು...



“ಹೆಜ್ಜೆಗೊಂದು ಬಿಂಬ. ಬಿಂಬ ಮೂಡಿದ ಹಾದಿಯತ್ತ ಹೊರಳಿವೆ ಪುಟ್ಟ ಕಂಗಳು. ಎಲ್ಲೆಡೆ ಜನಸಂದಣಿ. ಮುಸ್ಸಂಜೆಗೊಂಡು ಹಬ್ಬ. ಹಿಡಿದ ಕೈಗಳಲ್ಲಿ ಸೋಲುವ ಮಾತಿಲ್ಲ. ಸಂಜೆಗಳು ಸಾಕ್ಷಿಯಾಗಬಲ್ಲವು, ಇಂತಹ ಅನನ್ಯ ಬಾಂಧವ್ಯಗಳಿಗೆ. ಪ್ರತಿ ಹೆಜ್ಜೆಗೂ ಅನುಭವದ ಬಣ್ಣ ಅಂಟಬಹುದು. ಎಲ್ಲ ಬಣ್ಣಗಳ ತೊಟ್ಟು ಬದುಕು ಕಂಗೊಳಿಸಬಹುದು - ಹಾದಿಗಳು ಮಾತ್ರ ಬಿದ್ದಲ್ಲೇ ಬಿದ್ದಿವೆ. ಪ್ರತಿದಿನವೂ ಹೊಸ ನೋಟ ಕಾಣುತ್ತ. ಗೆಜ್ಜೆಸದ್ದುಗಳ ಕೇಳುತ್ತ.