Tuesday 20 March 2018

ಒಂಟಿ ಹಕ್ಕಿಯ ಹಾಡು. . .



ಒಂಟಿ ಹಕ್ಕಿಯ ಹಾಡು,
ಕೇಳುವವರಾರಿಹರು?
ಅಲ್ಲೆಲ್ಲೋ  ಕುಳಿತವರೋ?
ಇನ್ನೆಲ್ಲೋ ಮರೆಯಾದವರೋ?

ಇನ್ನೇನು, ಸ್ವಲ್ಪ ಸಮಯಕ್ಕೆ,
ಕುಳಿತ ಹಕ್ಕಿಯೂ ಮರೆಯಾಗುತ್ತದೆ,
ಅಂತೆಯೇ, ಅದರ ಹಾಡೂ ಕೂಡ!
ಆಲಿಸಲು ಕಿವಿಗಳೇಕೆ ಬೇಕು?

ಇಲ್ಲಿ, ಹಕ್ಕಿಗಳು ಮುಗಿಲು ತೊರೆಯುತ್ತವೆ ,
ಮಂದಿ ಮುಗಿಲು ಮುಟ್ಟುತ್ತಾರೆ,
ಕನಸುಗಳ ರೆಕ್ಕೆ ಜ್ವಲಿಸುತ್ತದೆ,
ಹಾಡೊಂದು ಮೆಲ್ಲಗೆ ಚಲಿಸುತ್ತದೆ!

ಹಾಡ ಹೆಜ್ಜೆ ಹಿಡಿದು ಸಾಗು,
ಬಿದ್ದ ರೆಕ್ಕೆಗಳೂ ಕಾಣಬಹುದು,
ಕದ್ದ ಕವಿತೆಗಳೂ ಕಾಣಬಹುದು!
ಸದ್ದು ಮಾಡಬೇಡ, ಹಕ್ಕಿ ಹಾರೀತು!

 -------------- ಆದಿ

Thursday 8 March 2018

ಇಳಿಸಂಜೆಯ ತಳಿರು. . .!


                           ಬರಿದಾಗಿಲ್ಲ ಮಾತುಗಳು,  ಸರಿದಿಲ್ಲ ಬೆಳಕ ತೆರೆ! ಹಸಿರು ಮನೆಯಲ್ಲಿ , ನೆರಳು ನಗುವುದು, ತಳಿರು ತೂಗುವುದು, ಕಲ್ಲು ಬೆಂಚುಗಳಲ್ಲಿ ಗುರುತು ಮೂಡಿಲ್ಲ, ಎದೆಯ ಹಾದಿಯಲ್ಲೇಕೆ ಹೆಜ್ಜೆ ಗುರುತು? ದಶಕಗಳು ಕ್ಷಣಗಳಾಗಿ ನೆನಪ ಸೇರಿದವು.  ಸಾಗಿ ಬಂದ ಹಾದಿಯ ಹೂಗಳ ಕೇಳು. ಹೊಸ ಹಾಡೊಂದ ಬರೆಯಲು ಪದಗಳ ನೀಡುವಿರಾ? ಘಮಿಸಿದರೆ ಅದುವೇ ಸಾಹಿತ್ಯ! ರಮಿಸಿದರೆ, ಅದುವೇ ಸಾಂಗತ್ಯ.