Thursday, 8 March 2018

ಇಳಿಸಂಜೆಯ ತಳಿರು. . .!


                           ಬರಿದಾಗಿಲ್ಲ ಮಾತುಗಳು,  ಸರಿದಿಲ್ಲ ಬೆಳಕ ತೆರೆ! ಹಸಿರು ಮನೆಯಲ್ಲಿ , ನೆರಳು ನಗುವುದು, ತಳಿರು ತೂಗುವುದು, ಕಲ್ಲು ಬೆಂಚುಗಳಲ್ಲಿ ಗುರುತು ಮೂಡಿಲ್ಲ, ಎದೆಯ ಹಾದಿಯಲ್ಲೇಕೆ ಹೆಜ್ಜೆ ಗುರುತು? ದಶಕಗಳು ಕ್ಷಣಗಳಾಗಿ ನೆನಪ ಸೇರಿದವು.  ಸಾಗಿ ಬಂದ ಹಾದಿಯ ಹೂಗಳ ಕೇಳು. ಹೊಸ ಹಾಡೊಂದ ಬರೆಯಲು ಪದಗಳ ನೀಡುವಿರಾ? ಘಮಿಸಿದರೆ ಅದುವೇ ಸಾಹಿತ್ಯ! ರಮಿಸಿದರೆ, ಅದುವೇ ಸಾಂಗತ್ಯ. 

Monday, 19 February 2018

ತೇಜೋಮಯ. . .



ಬೆಳಕೊಂದು ಸೋಜಿಗ. ಪ್ರತಿಫಲಿಸಿದಂತೆಲ್ಲ ವಿವಿಧ ರೂಪ ಪಡೆಯಬಲ್ಲದು. ಇಲ್ಲಿ ರವಿಗೂ ಆಯಸ್ಸಿದೆ. ಆ ಮಹಾನಕ್ಷತ್ರವು ಪತನದತ್ತ ಸಾಗುತ್ತಿದೆ. ಸಹಸ್ರ ಕೋಟಿ ಸೌರಮಂಡಲಗಳಿರುವ ನಮ್ಮ "ಹಾಲು ಹಾದಿಯಲ್ಲಿ" ಎಲ್ಲೆಲ್ಲಿ ಜೀವ ವೈವಿಧ್ಯವೋ, . ಬೆಳಕು ಚಲಿಸಿದಲ್ಲೆಲ್ಲ ಬದುಕು. ಬೆಳಕು ಜ್ವಲಿಸಿದಲ್ಲೆಲ್ಲ ಪತನ. ಪುಟ್ಟ ಜೀವಿಯ, ಪುಟ್ಟ ಮನೆಯೊಂದು, ಬೆಳಕಿನ ಕಿರಣಗಳಿಗೆ ಸ್ಪಂದಿಸುತ್ತದೆ. ಇಲ್ಲಿ ಬೆಳಕಿಗೆ ರೂಪಾಂತರ. ಬದುಕಿಗೆ ಹೊಸ ಮನ್ವಂತರ. . .

Wednesday, 31 January 2018

ತೇರ ಏರಿ ಅಂಬರದಾಗೇ. . .



                         ಮೂಡಣದಲ್ಲಿ ಹಣತೆಯೊಂದು ಬೆಳಗುವ ಸಮಯ. ಇರುಳು ಸುಮ್ಮನೆ ಹಿಂದೆ ಸರಿಯುತ್ತದೆ. ದೀಪ ತಂತಾನೆ ಹೊತ್ತಿ ಉರಿಯುತ್ತದೆ. ಇದು ಮುಗಿಲು ರಂಗೇರುವ ಸಮಯ.  ಆಗಲೇ ಸಾಯಬೇಕಿದ್ದ ಒಣಗಿದ ಹುಲ್ಲು ಕಡ್ಡಿಯೊಂದು ಕತ್ತೆತ್ತಿ ನೋಡುತ್ತದೆ, ಬೆಳಕಿಗೆ ತಲೆ ಬಾಗುತ್ತದೆ. ಕಾಲಚಕ್ರಕ್ಕೆ  ಸಿಲುಕಿ  ಬೆಳ್ಳಿರಥವೊಂದು ತನ್ನ ವೇಗ ಬದಲಿಸುತ್ತದೆ. ಹಕ್ಕಿಯೊಂದು  ಹಾಡುತ್ತದೆ. ನೆನಪೊಂದು ಕಾಡುತ್ತದೆ. ಮೇಣ ಕರಗುವ ಮುನ್ನ, ಸೊಡರು ದೀಪವೊಂದು ಜಗವೆ ಬೆರಗಾಗುವಷ್ಟು ಬೆಳಕ ನೀಡುತ್ತದೆ.