Wednesday, 13 December 2017

ಹೆಜ್ಜೆ ಮೂಡದ ಹಾದಿ. . .



                            ಬಾ ಜೊತೆಗೆ ಸಾಗೋಣ, ಒಂದಷ್ಟು ಗಾವುದ. ಮಾತು ಮಾತುಗಳಲಿ ಮೌನವೆಂಬುದ ಮರೆತು. ಮೂಡದಿರಲಿ  ಹೆಜ್ಜೆಯ ಗುರುತು, ಬಳಸಿ ಬಂದಾರು ಹತ್ತಾರು ಮಂದಿ. ಅಂಟದಿರಲಿ ಹಾಸಿದ ಹೂವಿನ ಬಣ್ಣ, ನೆನಪುಗಳು ಎಂದಿಗೂ ತಿಳಿನೀರ ಬಿಂಬದಂತೆ.  ಸಾಗಿ ಬಂದ ತಿರುವುಗಳೇ, ಬದುಕಿನ ರೋಚಕತೆಯ ಮೂಲ. ತೀರದ ದಾಹಕೂ, ಇಲ್ಲ ಸಲ್ಲದ ಮೋಹಕೂ - ತಿರುಗಿ ನೋಡಲೊಲ್ಲದು ಕಾಲ. . . 

Tuesday, 5 December 2017

ಹೆಜ್ಜೆ ಬೆಸೆದು. . .





                         ಹೆಜ್ಜೆಯೊಡನೆ ಹೆಜ್ಜೆಯಿಡು, ಕರೆದೊಯ್ಯುವೆ ಬದುಕ ಪಥದಲ್ಲಿ. ಗೆಜ್ಜೆ ಸದ್ದು ಕೇಳದಂತೆ, ಮೆಲ್ಲ ಮೆಲ್ಲಗೆ ಸಾಗುವ - ಗದ್ದಲಕೆ ಮೌನ ಮುರಿದೀತು.  ಉದುರಿದ ಎಲೆಗಳೇ ಇಲ್ಲಿ ಹೂವ ಹಾದಿಯಂತೆ. ತಣ್ಣನೆ ಗಾಳಿಗೆ ಮೌನ ಮಾತಾದೀತು. ನಿಂತ ಮರವೊಂದು ದೃಷ್ಟಿ ತೆಗೆದೀತು. ಸೃಷ್ಟಿಯ ಸೋಜಿಗಕೆ ಯಾವ ಒಲವಿನ ಹಂಗು? ಅದು ಎಲ್ಲದಕ್ಕೂ ಎತ್ತರ. ನೀಡದೆಂದಿಗೂ ಉತ್ತರ. ಮೆಲ್ಲಗೆ ಆಲಿಸುವೆಯಾ, ಇಲ್ಲಿ ಇಂಚರವೂ ಹಾಡಾದೀತು.


Tuesday, 28 November 2017

ಕಸದ ರಾಶಿಯಲೊಂದು ಕುಸುಮ. . .


                        ಕಸದ ರಾಶಿಯಿಂದ ಕುಸುಮವೊಂದು ಇಣುಕಿದೆ. ಮಿಣುಕು ದೀಪದ ತುಣುಕೊಂದು ಇರುಳ ಛೇದಿಸಿ ಬೆಳಗಿದಂತೆ. ಕ್ಷಣ ಕ್ಷಣವೂ ಇಲ್ಲಿ ಅಸ್ಥಿತ್ವಕ್ಕೆ ಹೋರಾಟ.  ಜೊತೆಗಿದ್ಕ ಬಳಗ ಕಸದ ನಡುವೆಲ್ಲೋ ಕಳೆದು ಹೋಗಿದೆ.  ಕತ್ತೆತ್ತಿ ನೋಡಿರೆ ಸುತ್ತಲೂ ಹೆಜ್ಜೆಗಳ ಕರ್ಕಶ ಸದ್ದು. ಎದೆಯಲ್ಲಿ ತುಳಿತಕ್ಕಿ ಸಿಕ್ಗುವ ಭಯ. ಬೀಸಿದ ಗಾಳಿಗೆ ಮುಗಿಬಿದ್ದ ಎಲೆಯೊಂದು ಹೂವ ಕಣ್ಣ ಮುಚ್ಚಿತು. ಹೊತ್ತು ಮುಳುಗುವ ಮುನ್ನವೇ ಸುತ್ತೆಲ್ಲ ಅಂಧಕಾರ. ಮತ್ತೆ ಗಾಳಿ ಬೀಸಲಿ ಎಂಬ ಸಣ್ಣ ಹಂಬಲ.  ಆಗೋ ನೋಡು. ಬೀಸಿತು ಗಾಳಿ. ನಕ್ಕಿತು ಹೂವು, ಕಾರಣವಾ ನೀವೇ ಕೇಳಿ. . . !