Tuesday 24 September 2019



ಕೆಸರಲ್ಲೊಂದು ಬಿಂಬ ಮೂಡಿದೆ,
ಮುಗಿದ ಮಳೆಯ ಕುರುಹಂತೆ,

ಇಷ್ಟು ದಿನ ತೆಂಗು ಗರಿಗಳು,
ಗಾಳಿ ಮಾತಿಗೆ ತಲೆದೂಗುತ್ತಿದ್ದವು,
ಆದರೆ ವಾರದಿಂದ ಸುರಿದ ಮಳೆಗೆ
ಬದುಕು ಮೆಲ್ಲಗೆ ಬದಲಾಗಿದೆ,
ಗರಿಗಳೀಗ ನೀರ ಮಾತು ಕೇಳುತ್ತಿವೆ. . .

ನೀರ ತರಂಗಗಳಿಗೆ ಅನಿವಾರ್ಯತೆ,
ಬಿದ್ದ ಹನಿಗಳ ಮಾತಿಗೆ ಮಣಿಯಲೇಬೇಕು,
ಪ್ರತಿಬಿಂಬದ ಬದುಕು ಅಷ್ಟೇ ತಾನೇ?
ನೀರಿಗೆ ಅಂಟಿಕೊಂಡೇ ಬದುಕಬೇಕು. . .

ಬಿಂಬಗಳ ಈ ಕಲ್ಪನಾ ಲೋಕಕ್ಕೆ,
ನೀರೇ ಅನಭಿಷಿಕ್ತ ದೊರೆಯಂತೆ,
ಮೂಡುತಿಹ ದೃಶ್ಯ ಚಿತ್ತಾರಗಳಿಗೆ
ಬೆಳಕೇ ಜೀವಂತ ತೆರೆಯಂತೆ,

ಮೋಡಗಳ ಮರೆಯಿಂದ
ಕಿರಣವೊಂದು ಇಣುಕಿದರೆ ಸಾಕು,
ಕಲ್ಪನಾ ಜಗತ್ತು ಕರಗಿ ಹೋಗಲು,
ಕನಸ ನೌಕೆಯೊಂದು ಕಡಲ ಸೇರಲು!

ಆದರೇನಂತೆ,
ಕೆಸರಲ್ಲೊಂದು ಜೀವ ನುಡಿದಿದೆ,
ನಿಲ್ಲದ ಮಳೆಯ ಸ್ವರದಂತೆ!

                  --------ಆದರ್ಶ

Monday 23 July 2018

ರೆಕ್ಕೆಯಿದ್ದರೆ ಸಾಕೇ?




ಚಿಟ್ಟೆಯಂತೆ ಹಾರಬಹುದು,
ತೆರೆದ ಮುಗಿಲೊಂದು ಬೇಕು,
ನಾಲ್ಕೇ ರೆಕ್ಕೆಗಳು ಸಾಕು!

ಆಗೊಮ್ಮೆ ಈಗೊಮ್ಮೆ ಗಾಳಿ ಬೀಸೀತು
ನೋಡ ನೋಡುತ್ತಲೇ ದಿಕ್ಕೂ ತಪ್ಪೀತು,
ಆದರೇನಂತೆ? ಬೀಳುವ ಭಯವಿಲ್ಲ
ನದಿಯ ನೀರಂತೆ ಚಲಿಸಬೇಕು

ದಟ್ಟ ಅಡವಿಗಳ, ಗದ್ದಲದ ನಗರಗಳ,
ಮಾತು ಕೇಳುತ್ತ  ನದಿ ಸಾಗುತ್ತದೆ. 
ಕಡಲ ಸೇರುವ ಗುರಿಯಲ್ಲ ಅದಕೆ,
ಜಗವ ನೋಡುವ ಅತೀವ ಬಯಕೆ!

ನದಿಯಾಗಲೇ? ಚಿಟ್ಟೆಯಾಗಲೇ?
ರೂಪಾಂತರಕ್ಕೆ ಒಗ್ಗಬಲ್ಲೆನೇ?
ಪ್ರಶ್ನೆಗಳಿಗೆ ಪ್ರಶ್ನೆಗಳು ಹುಟ್ಟಿ,
ಅವೇ ನದಿಯಾಗುವ ಸೂಚನೆ ನೀಡುತ್ತಿವೆ!

ನೋಡ ನೋಡುತ್ತಲೇ ಚಿಟ್ಟೆಯಾದೆ ನಾ!
ಮೋಡ ಕರಗುವ ಮುನ್ನ,
ಮುಗಿಲ ಸೇರಲು ಸಾಧ್ಯವೇ?
ಮಳೆ ಬಂದರೇನು? ಹಸಿರೆಲೆಯ ಚಪ್ಪರವಿದೆ!

ಹರಿವ ನದಿಯಾಗಿದ್ದರೆ ,
ಒದ್ದೆಯಾದ ರೆಕ್ಕೆಗಳ ಗೋಜಲು ಇಲ್ಲ .
ಬೀಳೋ ಹನಿಗಳ ಬಿಸಿಏಟೂ ಇಲ್ಲ ,
ಮಳೆಯಲ್ಲಿ ಮೈದುಂಬಿ ಹರಿಯಬಹುದಿತ್ತು!

ಮತ್ತದೇ ಗೊಂದಲ,
ನದಿಯಾಗಲೇ?
ಸಾಗಲು ಹಾದಿಯೊಂದು ಬೇಕು!
ಬಳುಕೋ ಮೈಯಷ್ಟು ಸಾಕು!


- ಆದರ್ಶ 

Tuesday 15 May 2018

Malleshwaram diaries!




ಆಭರಣಗಳ ಬಣ್ಣ ಮಾಸಬಹುದು.
ಆದರೆ ಬದುಕಿನ ಬಣ್ಣ ಮಾಸೀತೆ? 

ನಗರದ ನಡುವಲ್ಲೊಂದು ಜೀವ,
ಕಾಲಘಟ್ಟಗಳ ಮೀರಿ ನಿಲ್ಲುವುದು ,
ಬಿದ್ದ ಮಳೆಗೆ, ಬದುಕೂ ಗೊತ್ತಿಲ್ಲ,
ಕದ್ದ ಕವಿತೆಯಲಿ, ಭಾವ ಸತ್ತಿಲ್ಲ!

ಇಳಿಸಂಜೆಗೊಂದು ಕನಸು,
ಸಜ್ಜಾಗಿ ಬೀದಿಗೆ ಇಳಿಯುವುದು,
ತುಳಿದ ಹೆಜ್ಜೆಗಳೆಷ್ಟೋ!
ಹಾದು ಹೋದ ಚಕ್ರಗಳೆಷ್ಟೋ!

ಎಲ್ಲವನ್ನು ಒಡಲಿನಾಳಕ್ಕೆ ನೂಕಿ,
ಸಮಯ ಚಲಿಸುವಂತೆ ತೋರುತ್ತದೆ,
ಹಳೆಯ ಗಾಯಗಳನ್ನೆಲ್ಲ ಮರೆತು,
ನಗರ ಕಿರುನಗೆಯೊಂದ ಬೀರುತ್ತದೆ!

ಎಲ್ಲಿ ಹೋಯಿತೇನೋ ಆ ಕನಸು!
ಮಳೆಯೊಂದು ಬಂದು ಹೋಗಿದೆ!
ಈಗಂತೂ ಎಲ್ಲೆಲ್ಲೂ ಮಣ್ಣ ಘಮಲು!
ತಿಳಿದ ದಾರಿಯಲ್ಲೂ ನೂರೆಂಟು ಕವಲು!