ಚಿಟ್ಟೆಯಂತೆ
ಹಾರಬಹುದು,
ತೆರೆದ ಮುಗಿಲೊಂದು
ಬೇಕು,
ನಾಲ್ಕೇ ರೆಕ್ಕೆಗಳು
ಸಾಕು!
ಆಗೊಮ್ಮೆ ಈಗೊಮ್ಮೆ
ಗಾಳಿ ಬೀಸೀತು
ನೋಡ ನೋಡುತ್ತಲೇ
ದಿಕ್ಕೂ ತಪ್ಪೀತು,
ಆದರೇನಂತೆ? ಬೀಳುವ
ಭಯವಿಲ್ಲ
ನದಿಯ ನೀರಂತೆ
ಚಲಿಸಬೇಕು
ದಟ್ಟ ಅಡವಿಗಳ,
ಗದ್ದಲದ ನಗರಗಳ,
ಮಾತು ಕೇಳುತ್ತ
ನದಿ ಸಾಗುತ್ತದೆ.
ಕಡಲ ಸೇರುವ ಗುರಿಯಲ್ಲ
ಅದಕೆ,
ಜಗವ ನೋಡುವ ಅತೀವ
ಬಯಕೆ!
ನದಿಯಾಗಲೇ? ಚಿಟ್ಟೆಯಾಗಲೇ?
ರೂಪಾಂತರಕ್ಕೆ
ಒಗ್ಗಬಲ್ಲೆನೇ?
ಪ್ರಶ್ನೆಗಳಿಗೆ
ಪ್ರಶ್ನೆಗಳು ಹುಟ್ಟಿ,
ಅವೇ ನದಿಯಾಗುವ
ಸೂಚನೆ ನೀಡುತ್ತಿವೆ!
ನೋಡ ನೋಡುತ್ತಲೇ
ಚಿಟ್ಟೆಯಾದೆ ನಾ!
ಮೋಡ
ಕರಗುವ ಮುನ್ನ,
ಮುಗಿಲ
ಸೇರಲು ಸಾಧ್ಯವೇ?
ಮಳೆ
ಬಂದರೇನು? ಹಸಿರೆಲೆಯ ಚಪ್ಪರವಿದೆ!
ಹರಿವ
ನದಿಯಾಗಿದ್ದರೆ ,
ಒದ್ದೆಯಾದ
ರೆಕ್ಕೆಗಳ ಗೋಜಲು ಇಲ್ಲ .
ಬೀಳೋ
ಹನಿಗಳ ಬಿಸಿಏಟೂ ಇಲ್ಲ ,
ಮಳೆಯಲ್ಲಿ
ಮೈದುಂಬಿ ಹರಿಯಬಹುದಿತ್ತು!
ಮತ್ತದೇ
ಗೊಂದಲ,
ನದಿಯಾಗಲೇ?
ಸಾಗಲು
ಹಾದಿಯೊಂದು ಬೇಕು!
ಬಳುಕೋ
ಮೈಯಷ್ಟು ಸಾಕು!
- ಆದರ್ಶ
No comments:
Post a Comment