Monday, 23 July 2018

ರೆಕ್ಕೆಯಿದ್ದರೆ ಸಾಕೇ?




ಚಿಟ್ಟೆಯಂತೆ ಹಾರಬಹುದು,
ತೆರೆದ ಮುಗಿಲೊಂದು ಬೇಕು,
ನಾಲ್ಕೇ ರೆಕ್ಕೆಗಳು ಸಾಕು!

ಆಗೊಮ್ಮೆ ಈಗೊಮ್ಮೆ ಗಾಳಿ ಬೀಸೀತು
ನೋಡ ನೋಡುತ್ತಲೇ ದಿಕ್ಕೂ ತಪ್ಪೀತು,
ಆದರೇನಂತೆ? ಬೀಳುವ ಭಯವಿಲ್ಲ
ನದಿಯ ನೀರಂತೆ ಚಲಿಸಬೇಕು

ದಟ್ಟ ಅಡವಿಗಳ, ಗದ್ದಲದ ನಗರಗಳ,
ಮಾತು ಕೇಳುತ್ತ  ನದಿ ಸಾಗುತ್ತದೆ. 
ಕಡಲ ಸೇರುವ ಗುರಿಯಲ್ಲ ಅದಕೆ,
ಜಗವ ನೋಡುವ ಅತೀವ ಬಯಕೆ!

ನದಿಯಾಗಲೇ? ಚಿಟ್ಟೆಯಾಗಲೇ?
ರೂಪಾಂತರಕ್ಕೆ ಒಗ್ಗಬಲ್ಲೆನೇ?
ಪ್ರಶ್ನೆಗಳಿಗೆ ಪ್ರಶ್ನೆಗಳು ಹುಟ್ಟಿ,
ಅವೇ ನದಿಯಾಗುವ ಸೂಚನೆ ನೀಡುತ್ತಿವೆ!

ನೋಡ ನೋಡುತ್ತಲೇ ಚಿಟ್ಟೆಯಾದೆ ನಾ!
ಮೋಡ ಕರಗುವ ಮುನ್ನ,
ಮುಗಿಲ ಸೇರಲು ಸಾಧ್ಯವೇ?
ಮಳೆ ಬಂದರೇನು? ಹಸಿರೆಲೆಯ ಚಪ್ಪರವಿದೆ!

ಹರಿವ ನದಿಯಾಗಿದ್ದರೆ ,
ಒದ್ದೆಯಾದ ರೆಕ್ಕೆಗಳ ಗೋಜಲು ಇಲ್ಲ .
ಬೀಳೋ ಹನಿಗಳ ಬಿಸಿಏಟೂ ಇಲ್ಲ ,
ಮಳೆಯಲ್ಲಿ ಮೈದುಂಬಿ ಹರಿಯಬಹುದಿತ್ತು!

ಮತ್ತದೇ ಗೊಂದಲ,
ನದಿಯಾಗಲೇ?
ಸಾಗಲು ಹಾದಿಯೊಂದು ಬೇಕು!
ಬಳುಕೋ ಮೈಯಷ್ಟು ಸಾಕು!


- ಆದರ್ಶ 

Tuesday, 15 May 2018

Malleshwaram diaries!




ಆಭರಣಗಳ ಬಣ್ಣ ಮಾಸಬಹುದು.
ಆದರೆ ಬದುಕಿನ ಬಣ್ಣ ಮಾಸೀತೆ? 

ನಗರದ ನಡುವಲ್ಲೊಂದು ಜೀವ,
ಕಾಲಘಟ್ಟಗಳ ಮೀರಿ ನಿಲ್ಲುವುದು ,
ಬಿದ್ದ ಮಳೆಗೆ, ಬದುಕೂ ಗೊತ್ತಿಲ್ಲ,
ಕದ್ದ ಕವಿತೆಯಲಿ, ಭಾವ ಸತ್ತಿಲ್ಲ!

ಇಳಿಸಂಜೆಗೊಂದು ಕನಸು,
ಸಜ್ಜಾಗಿ ಬೀದಿಗೆ ಇಳಿಯುವುದು,
ತುಳಿದ ಹೆಜ್ಜೆಗಳೆಷ್ಟೋ!
ಹಾದು ಹೋದ ಚಕ್ರಗಳೆಷ್ಟೋ!

ಎಲ್ಲವನ್ನು ಒಡಲಿನಾಳಕ್ಕೆ ನೂಕಿ,
ಸಮಯ ಚಲಿಸುವಂತೆ ತೋರುತ್ತದೆ,
ಹಳೆಯ ಗಾಯಗಳನ್ನೆಲ್ಲ ಮರೆತು,
ನಗರ ಕಿರುನಗೆಯೊಂದ ಬೀರುತ್ತದೆ!

ಎಲ್ಲಿ ಹೋಯಿತೇನೋ ಆ ಕನಸು!
ಮಳೆಯೊಂದು ಬಂದು ಹೋಗಿದೆ!
ಈಗಂತೂ ಎಲ್ಲೆಲ್ಲೂ ಮಣ್ಣ ಘಮಲು!
ತಿಳಿದ ದಾರಿಯಲ್ಲೂ ನೂರೆಂಟು ಕವಲು!

Wednesday, 9 May 2018

Web of life. . .



ಹರಡಿದ ಮರಳ ಮೇಲೆ ಸತ್ತ ಮೀನುಗಳು. ಅಲ್ಲೇ ಒಂದು ಬದುಕು ಅರಳುತ್ತದೆ. ಸುಡುವ ಬಿಸಿಲಿಗೆ ಕಡಲ ತಳ ಸೇರಿ ನಲಿಯುತ್ತಿದ್ದ ಪುಟ್ಟ ಜೀವಗಳೆಲ್ಲ ಈಗ ಕಾದ ಮರಳ ಮೇಲೆ ಬಿದ್ದಿವೆ. ದಡಕ್ಕೆ ತಾಕುವ ಅಲೆಗಳು ಮೀನ ದೇಹವನ್ನೂ, ಮೀನುಗಾರನ ಅಂಗಾಲನ್ನೂ ಸ್ಪರ್ಶಿಸುತ್ತವೆ. ಜೀವ ತಂತು ಮಾತ್ರ ಒಂದೇ ಕಡೆ ಕಂಪಿಸುತ್ತದೆ. ಸೂರ್ಯ ನೆತ್ತಿಗೇರಿದಂತೆಲ್ಲ, ನೆರಳು ಕಿರಿದಾಗುವಂತೆ ತೋರುತ್ತದೆ. ಅರಸಿ ಬಂದ ಮುಗಿಲ ಹಕ್ಕಿ, ದಿಕ್ಕು ದೆಸೆಯಿಲ್ಲದಂತೆ ಹಾರುತ್ತದೆ. .

Thursday, 12 April 2018

ನಗೆಯ ಹಾಯಿದೋಣಿ. . .



                 
                          ಭೋರ್ಗರೆಯುವ ಅಲೆಗಳು. ನೋಡು, ನೋಡಲ್ಲಿ, ದೋಣಿಯೊಂದು ಸಾಗುತಿದೆ. ನೀಲ ನಭಕೂ, ನೀಲಿ ಕಡಲಿಗೂ ಇಲ್ಲಿ ಕಾಣದೊಂದು ಅಂತರ. ಬಿಸಿಲ ಬೇಗೆ ಎಷ್ಟಿದ್ದರೇನು? ದೂರ ತೀರವೊಂದಿದೆಯಲ್ಲ.  ಕಾಣದಿದ್ದರೇನಂತೆ? ಚಾಚಿದ ಮುಗಿಲ ಹಾರೈಕೆಯಿಹುದಲ್ಲ.  ಕಡಲ ದಾಟುವ ಕಾತರತೆಯಿಹುದಲ್ಲ. ಬೆಳಕಿರುವಾಗಷ್ಟೇ ಬದುಕಲ್ಲ! ಕಡಲಿರುವಷ್ಟೇ ಮುಗಿಲಲ್ಲ!

Tuesday, 20 March 2018

ಒಂಟಿ ಹಕ್ಕಿಯ ಹಾಡು. . .



ಒಂಟಿ ಹಕ್ಕಿಯ ಹಾಡು,
ಕೇಳುವವರಾರಿಹರು?
ಅಲ್ಲೆಲ್ಲೋ  ಕುಳಿತವರೋ?
ಇನ್ನೆಲ್ಲೋ ಮರೆಯಾದವರೋ?

ಇನ್ನೇನು, ಸ್ವಲ್ಪ ಸಮಯಕ್ಕೆ,
ಕುಳಿತ ಹಕ್ಕಿಯೂ ಮರೆಯಾಗುತ್ತದೆ,
ಅಂತೆಯೇ, ಅದರ ಹಾಡೂ ಕೂಡ!
ಆಲಿಸಲು ಕಿವಿಗಳೇಕೆ ಬೇಕು?

ಇಲ್ಲಿ, ಹಕ್ಕಿಗಳು ಮುಗಿಲು ತೊರೆಯುತ್ತವೆ ,
ಮಂದಿ ಮುಗಿಲು ಮುಟ್ಟುತ್ತಾರೆ,
ಕನಸುಗಳ ರೆಕ್ಕೆ ಜ್ವಲಿಸುತ್ತದೆ,
ಹಾಡೊಂದು ಮೆಲ್ಲಗೆ ಚಲಿಸುತ್ತದೆ!

ಹಾಡ ಹೆಜ್ಜೆ ಹಿಡಿದು ಸಾಗು,
ಬಿದ್ದ ರೆಕ್ಕೆಗಳೂ ಕಾಣಬಹುದು,
ಕದ್ದ ಕವಿತೆಗಳೂ ಕಾಣಬಹುದು!
ಸದ್ದು ಮಾಡಬೇಡ, ಹಕ್ಕಿ ಹಾರೀತು!

 -------------- ಆದಿ

Thursday, 8 March 2018

ಇಳಿಸಂಜೆಯ ತಳಿರು. . .!


                           ಬರಿದಾಗಿಲ್ಲ ಮಾತುಗಳು,  ಸರಿದಿಲ್ಲ ಬೆಳಕ ತೆರೆ! ಹಸಿರು ಮನೆಯಲ್ಲಿ , ನೆರಳು ನಗುವುದು, ತಳಿರು ತೂಗುವುದು, ಕಲ್ಲು ಬೆಂಚುಗಳಲ್ಲಿ ಗುರುತು ಮೂಡಿಲ್ಲ, ಎದೆಯ ಹಾದಿಯಲ್ಲೇಕೆ ಹೆಜ್ಜೆ ಗುರುತು? ದಶಕಗಳು ಕ್ಷಣಗಳಾಗಿ ನೆನಪ ಸೇರಿದವು.  ಸಾಗಿ ಬಂದ ಹಾದಿಯ ಹೂಗಳ ಕೇಳು. ಹೊಸ ಹಾಡೊಂದ ಬರೆಯಲು ಪದಗಳ ನೀಡುವಿರಾ? ಘಮಿಸಿದರೆ ಅದುವೇ ಸಾಹಿತ್ಯ! ರಮಿಸಿದರೆ, ಅದುವೇ ಸಾಂಗತ್ಯ. 

Monday, 19 February 2018

ತೇಜೋಮಯ. . .



ಬೆಳಕೊಂದು ಸೋಜಿಗ. ಪ್ರತಿಫಲಿಸಿದಂತೆಲ್ಲ ವಿವಿಧ ರೂಪ ಪಡೆಯಬಲ್ಲದು. ಇಲ್ಲಿ ರವಿಗೂ ಆಯಸ್ಸಿದೆ. ಆ ಮಹಾನಕ್ಷತ್ರವು ಪತನದತ್ತ ಸಾಗುತ್ತಿದೆ. ಸಹಸ್ರ ಕೋಟಿ ಸೌರಮಂಡಲಗಳಿರುವ ನಮ್ಮ "ಹಾಲು ಹಾದಿಯಲ್ಲಿ" ಎಲ್ಲೆಲ್ಲಿ ಜೀವ ವೈವಿಧ್ಯವೋ, . ಬೆಳಕು ಚಲಿಸಿದಲ್ಲೆಲ್ಲ ಬದುಕು. ಬೆಳಕು ಜ್ವಲಿಸಿದಲ್ಲೆಲ್ಲ ಪತನ. ಪುಟ್ಟ ಜೀವಿಯ, ಪುಟ್ಟ ಮನೆಯೊಂದು, ಬೆಳಕಿನ ಕಿರಣಗಳಿಗೆ ಸ್ಪಂದಿಸುತ್ತದೆ. ಇಲ್ಲಿ ಬೆಳಕಿಗೆ ರೂಪಾಂತರ. ಬದುಕಿಗೆ ಹೊಸ ಮನ್ವಂತರ. . .

Wednesday, 31 January 2018

ತೇರ ಏರಿ ಅಂಬರದಾಗೇ. . .



                         ಮೂಡಣದಲ್ಲಿ ಹಣತೆಯೊಂದು ಬೆಳಗುವ ಸಮಯ. ಇರುಳು ಸುಮ್ಮನೆ ಹಿಂದೆ ಸರಿಯುತ್ತದೆ. ದೀಪ ತಂತಾನೆ ಹೊತ್ತಿ ಉರಿಯುತ್ತದೆ. ಇದು ಮುಗಿಲು ರಂಗೇರುವ ಸಮಯಆಗಲೇ ಸಾಯಬೇಕಿದ್ದ ಒಣಗಿದ ಹುಲ್ಲು ಕಡ್ಡಿಯೊಂದು ಕತ್ತೆತ್ತಿ ನೋಡುತ್ತದೆ, ಬೆಳಕಿಗೆ ತಲೆ ಬಾಗುತ್ತದೆ. ಕಾಲಚಕ್ರಕ್ಕೆ  ಸಿಲುಕಿ  ಬೆಳ್ಳಿರಥವೊಂದು ತನ್ನ ವೇಗ ಬದಲಿಸುತ್ತದೆ. ಹಕ್ಕಿಯೊಂದು  ಹಾಡುತ್ತದೆ. ನೆನಪೊಂದು ಕಾಡುತ್ತದೆ. ಮೇಣ ಕರಗುವ ಮುನ್ನ, ಸೊಡರು ದೀಪವೊಂದು ಜಗವೆ ಬೆರಗಾಗುವಷ್ಟು ಬೆಳಕ ನೀಡುತ್ತದೆ.

Friday, 26 January 2018

Surreal sunrise. . .

Rise. . . 
                     It is not always about sunrise. It is about hope. It is about the liveliness brought by the glimpse of Sunlight. Life blooms in the presence of divine light, hoping to sustain forever. It is not always about focus. It is about symbolism. It is about happiness brought by the essence of Golden light. Sunlight diffuses in the presence of the wide open sky to shine forever. . .