Tuesday, 15 May 2018

Malleshwaram diaries!




ಆಭರಣಗಳ ಬಣ್ಣ ಮಾಸಬಹುದು.
ಆದರೆ ಬದುಕಿನ ಬಣ್ಣ ಮಾಸೀತೆ? 

ನಗರದ ನಡುವಲ್ಲೊಂದು ಜೀವ,
ಕಾಲಘಟ್ಟಗಳ ಮೀರಿ ನಿಲ್ಲುವುದು ,
ಬಿದ್ದ ಮಳೆಗೆ, ಬದುಕೂ ಗೊತ್ತಿಲ್ಲ,
ಕದ್ದ ಕವಿತೆಯಲಿ, ಭಾವ ಸತ್ತಿಲ್ಲ!

ಇಳಿಸಂಜೆಗೊಂದು ಕನಸು,
ಸಜ್ಜಾಗಿ ಬೀದಿಗೆ ಇಳಿಯುವುದು,
ತುಳಿದ ಹೆಜ್ಜೆಗಳೆಷ್ಟೋ!
ಹಾದು ಹೋದ ಚಕ್ರಗಳೆಷ್ಟೋ!

ಎಲ್ಲವನ್ನು ಒಡಲಿನಾಳಕ್ಕೆ ನೂಕಿ,
ಸಮಯ ಚಲಿಸುವಂತೆ ತೋರುತ್ತದೆ,
ಹಳೆಯ ಗಾಯಗಳನ್ನೆಲ್ಲ ಮರೆತು,
ನಗರ ಕಿರುನಗೆಯೊಂದ ಬೀರುತ್ತದೆ!

ಎಲ್ಲಿ ಹೋಯಿತೇನೋ ಆ ಕನಸು!
ಮಳೆಯೊಂದು ಬಂದು ಹೋಗಿದೆ!
ಈಗಂತೂ ಎಲ್ಲೆಲ್ಲೂ ಮಣ್ಣ ಘಮಲು!
ತಿಳಿದ ದಾರಿಯಲ್ಲೂ ನೂರೆಂಟು ಕವಲು!

Wednesday, 9 May 2018

Web of life. . .



ಹರಡಿದ ಮರಳ ಮೇಲೆ ಸತ್ತ ಮೀನುಗಳು. ಅಲ್ಲೇ ಒಂದು ಬದುಕು ಅರಳುತ್ತದೆ. ಸುಡುವ ಬಿಸಿಲಿಗೆ ಕಡಲ ತಳ ಸೇರಿ ನಲಿಯುತ್ತಿದ್ದ ಪುಟ್ಟ ಜೀವಗಳೆಲ್ಲ ಈಗ ಕಾದ ಮರಳ ಮೇಲೆ ಬಿದ್ದಿವೆ. ದಡಕ್ಕೆ ತಾಕುವ ಅಲೆಗಳು ಮೀನ ದೇಹವನ್ನೂ, ಮೀನುಗಾರನ ಅಂಗಾಲನ್ನೂ ಸ್ಪರ್ಶಿಸುತ್ತವೆ. ಜೀವ ತಂತು ಮಾತ್ರ ಒಂದೇ ಕಡೆ ಕಂಪಿಸುತ್ತದೆ. ಸೂರ್ಯ ನೆತ್ತಿಗೇರಿದಂತೆಲ್ಲ, ನೆರಳು ಕಿರಿದಾಗುವಂತೆ ತೋರುತ್ತದೆ. ಅರಸಿ ಬಂದ ಮುಗಿಲ ಹಕ್ಕಿ, ದಿಕ್ಕು ದೆಸೆಯಿಲ್ಲದಂತೆ ಹಾರುತ್ತದೆ. .