ಒಡಲ ಕಡಲಲಿ 66 ದಿವಸ ತೇಲಿ ಕುರುಡಾಗಿ
ಜಗಕೆ ಕಾಲಿಡುವ ಬೆಕ್ಕಿನ ಮರಿಗಳದು
ಒಂದು ವಿಸ್ಮಯ ಪಯಣ. ಯಾವುದೋ ಕೊಟ್ಟಿಗೆಯ ಹುಲ್ಲ
ರಾಶಿಯಲೋ, ಅಟ್ಟದ ಮೇಲಿಟ್ಟ ಅನಾದಿಕಾಲದ
ಬುಟ್ಟಿಯೊಳಗಣ
ಪುಟ್ಟ ಕಾಶಿಯಲೋ, ನಮ್ಮೆಲ್ಲರಿಂದ ದೂರವಿಟ್ಟು ಮುದ್ದಿಸುವ ತಾಯ ದಿಟ್ಟ ನಿರ್ಧಾರದಲೋ
- ಇವುಗಳ ಜನನ ಶಾಸನ ಬರೆದಾಯ್ತು.
ಕಣ್ಣ ತೆರೆವ ಮೊದಲೇ ತಾಯ ಮಡಿಲ ಬೆಚ್ಚಗಿನ ಸುಖದಲಿ ಬದುಕೋ
ಬೆಕ್ಕಿನ ಮರಿಗಳು, ಎಲ್ಲದಕ್ಕೂ ಅಚ್ಚರಿಪಡುವ ಪುಟ್ಟ ಸೋಜಿಗಗಳು.
ಮಮತೆಯ ಮುದ್ದು |
ನಿರ್ಜನ ನೀರವ ಜಾಗದಲಿ, ಒಂಟಿಯಾಗಿ ಸಲಹುವ ತಾಯಿ,
ಬದುಕ ಮೊದಲ ಪಾಟ ಹೇಳುವಳೇನೋ- ನಾವೆಲ್ಲಿ ಕೇಳಿದ್ದು ! ರಕ್ಷಣೆಗೊ, ಉಕ್ಕುವ ಮಮತೆಗೊ, ಭಯಕ್ಕೋ - ಮಕ್ಕಳನು
ಜೋಲಿಸಿಕೊಂಡು ಅರಚುತ್ತ ತಿರುಗುವ ತಾಯಿಗೋ - ಜೋಪಾನ ಮಾಡುವ ಜವಾಬ್ದಾರಿ. ತಂದೆ ಎಂಬಾತ ನೆಪದಂತೆ ಬಂದು
ಹೋಗಿರುವಾಗ, ಒಂಟಿ ತಾಯ ಬದುಕು ಕಷ್ಟಸಾಧ್ಯವೇ. ಹೆಸರಿಗೆ
ಹೆಗಡೆ, ಮೊಸರಿಗೆ ಶಾನುಭೋಗ ! ಕುರುಡು
ಮರಿಗಳ ತಾಯಿ ನೆಕ್ಕಿ ಮುದ್ದಿಸುವುದು ನೆಪಕ್ಕಲ್ಲ
- ಹಾಲ್ಕುಡಿಯಲು ಹಾದಿತೋರಲು ವಿಧಾನ ಎನ್ನುತ್ತೆ ವಿಜ್ಞಾನ.
ಕಣ್ತೆರೆದು ಮಂದ ದೃಷ್ಟಿಯಲಿ ಜಗವ ನೋಡುವ ಮರಿಗಳಿಗೆ
ಅಚ್ಚರಿಯೋ ಅಪಘಾತವೋ. ಕೆಲವೊಮ್ಮೆ ಅನಾರೋಗ್ಯದಲಿ ಬಳಲುತಿರುವ ಅಥವಾ ತೀರಿಕೊಂಡ ಮರಿಗಳನು ತಾಯೆ ತಿನ್ನುವುದುಂಟು.
ಇನ್ನೂ ಕೆಲವೊಮ್ಮೆ ತಾಯ್ತನದ ಮಾನಸಿಕ ಒತ್ತಡಕ್ಕೆ ಮಣಿದು ತಿನ್ನುವುದೂ ಉಂಟು. ಮನುಷ್ಯರ ಜೊತೆಗಿನ
ಬಾಂಧವ್ಯವೂ ಅವುಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಲ್ಲವಾದರೆ, ಲಗಾಮಿಲ್ಲದ ಕುದುರೆಯಂತೆ,
ಮಾಲೀಕನ ಕಂಡು ಪರಾರಿಯಾಗುವುದೇ ಹೆಚ್ಚು.
ಕಣ್ಣ ಧೂಳನು ಒರೆಸಿ, ಹಾಲಲ್ಲಿ ಅಮೃತವ ಬೆರೆಸಿ,
ಮುದ್ದಿಸುವ, ಅಕ್ಕಪಕ್ಕದ ಮನೆಯ ಮುದ್ದು ಕಂಡ ಮರಿಯೊಡನೆ ಆಡಲು ಬಂದರೆ, ಮಗುವನ್ನೇ ಹೆದರಿಸಿ, ಮರಿಗಳನ್ನು
ಸ್ಥಳಾಂತರಿಸಿ, ಒಮ್ಮೊಮ್ಮೆ ಮಕ್ಕಳ ಸುತ್ತವೆ ಗಸ್ತು ಹೊಡೆಯುತ್ತ, ಗಾಡಿಯ ಕಾಯೋ ಸೈನಿಕನ ಹಾಗೆ ಕಾಯುವುದು
ತಾಯ ಪರಿಪಾಟಲು. ಕುಣಿದು ಕುಪ್ಪಳಿಸುವಷ್ಟು ಶಕ್ತರಾಗುವ ತನಕ,ಹೆಜ್ಜೆ ಜೊತೆ ಹೆಜ್ಜೆ ಬೆಸೆದು ಬದುಕು
ಕಲಿಸುವುದ ನೋಡುವುದೇ ಸೊಗಸು. ಮುದ್ದು ಹೆಚ್ಚಾದಾಗಲೆಲ್ಲಾ ಸಿಗುವ ಮುತ್ತು - ಬೆಲ್ಲದಚ್ಚು ಮೂಡಿದ
ಹಾಗೆ.
ತಾಯೆ ಮೊದಲ ಪಾಠಶಾಲೆಯೆಂಬಂತೆ, ಮೊದಲು ಚಿಕ್ಕ ಹುಳದ
ಬೇಟೆಯಿಂದ ಶುರುವಾಗಿ ಇಲಿಯೊಂದರ ಹರಣದವರೆಗೂ ಪಾಠ ನಡೆಯಬಲ್ಲದು. ಆಟ ಪಾಠಗಳೆಲ್ಲ ಮುಗಿದ ಮೇಲೆಯೇ ತಾಯಿಗೆ ಸುಖದ ನಿದ್ದೆ.
ಕ್ಯಾಮೆರಾ ಹಿಡಿದು ಹತ್ತಿರ ಸುಳಿವಾಗ, ಮರಿಗಳ ಸುತ್ತ ಗಸ್ತು ಹೊಡೆವ ತಾಯಿಗೆ ಅದಾವ ಆತಂಕವೋ. ಮೂರು
ತಿಂಗಳಾಗುವಷ್ಟರಲ್ಲಿ ಮರಿಗಳನ್ನು ಸ್ವತಂತ್ರವಾಗಿ ತೊರೆಯುವುದುಂಟು - ತಮ್ಮ ಬದುಕ ತಾವೇ
ಕಟ್ಟಿಕೊಳ್ಳಲಿ ಎಂದು.
ಅಕ್ಕಪಕ್ಕದಿಂದ ಹಿಡಿದು ಇಡೀ ಹಳ್ಳಿಗೆ ಕಣ್ಮಣಿಯಾಗಿರುವ
ಮರಿಗಳ ಎಷ್ಟು ಜನ ಕೇಳುವರೋ, ಎಷ್ಟು ಜನ ಸಾಕ ಬಯಸುವರೋ. ಯಾರನ್ನೋ ಮೆಚ್ಚಿಸಲು ಮರಿಗಳು ಬೆಳೆವ ಮೊದಲೇ
ಬೇರ್ಪಡಿಸಿ ಮಾರುವವರೆಷ್ಟೋ - ತಾಯ ಆಕ್ರಂದನ ನಾಲ್ಕು ಗೋಡೆಗಳ ನಡುವೆ ಪ್ರತಿಧ್ವನಿಸದೆ ಉಳಿದುಹೋದೀತು. ಎಂದೋ ಬಿದ್ದ ಮಳೆಗೆ ಎಲ್ಲೋ ಹೂವೊಂದು ಅರಳುವುದು. ಯಾರದೋ ಕೊಟ್ಟಿಗೆಯ ಯಾವುದೋ ಮೂಲೆಯಲಿ ತಾಯಿ ಮಡಿಲಿಗೆ
ಮರಿಯೊಂದು ಮರಳುವುದು. ಕಾಲಚಕ್ರ ಎಲ್ಲವನ್ನೂ ತನ್ನೊಡಲಿಗೆ ನೂಕಿ, ತಂತಾನೆ ಹೊರಳುವುದು.